ಸದ್ಭಕ್ತನ ಸಹಜಸ್ವಭಾವದ ನಡೆ ಹೇಗಿರಬೇಕೆಂದರೆ,
ಮನೆಗೆ ಬಂದ ಜಂಗಮವ ಕಂಡು
ಮನದಲ್ಲಿ ಸಂತೋಷವ ತಾಳಬೇಕು.
ಮದುವೆ ಮಾಂಗಲ್ಯ ಒಸಗೆ ಉತ್ಸಾಹದಂತೆ
ಹರ್ಷಾಬ್ಧಿ ತುಂಬಿ ತುಳುಕಿ ಹೊರಸೂಸಬೇಕು.
ಇಂದು ಎಮ್ಮ ಮನೆಗೆ ಮಹಾಪುಣ್ಯದ
ಫಲವು ಬಂದು ತುಂಬಿತೆಂದು
ಕುಣಿಕುಣಿದು ನೋಡಿ ಹಾಡಿ ಹರಸಬೇಕು.
ಸತಿಸುತರು ಸಹವಾಗಿ ಒಡಗೂಡಿ ಭಕ್ತಿಯ ಮಾಡಿ
ನಮ್ಮ ಅಖಂಡೇಶ್ವರಲಿಂಗವನೊಲಿಸಬೇಕು.