Index   ವಚನ - 151    Search  
 
ಸಂಗನಬಸವಣ್ಣನಂತೆ ಸದ್ ಭಕ್ತನೆಂದೆನಿಸಯ್ಯ ಎನ್ನ. ಮಡಿವಾಳಮಾಚಯ್ಯಗಳಂತೆ ವೀರಮಾಹೇಶ್ವರನೆಂದೆನಿಸಯ್ಯ ಎನ್ನ. ಚೆನ್ನಬಸವಣ್ಣನಂತೆ ಪರಮಪ್ರಸಾದಿಯೆಂದೆನಿಸಯ್ಯ ಎನ್ನ. ಸಿದ್ಧರಾಮನಂತೆ ಶುದ್ಧಪ್ರಾಣಲಿಂಗಿಯೆಂದೆನಿಸಯ್ಯ ಎನ್ನ. ಉರಿಲಿಂಗಪೆದ್ದಯ್ಯಗಳಂತೆ ಉರುತರದ ಶರಣನೆಂದೆನಿಸಯ್ಯ ಎನ್ನ. ಅಜಗಣ್ಣತಂದೆಗಳಂತೆ ನಿಜಲಿಂಗೈಕ್ಯನೆಂದೆನಿಸಯ್ಯ ಎನ್ನ. ನಿಜಗುಣಯೋಗಿಗಳಂತೆ ಪರಮ ಆರೂಢನೆಂದೆನಿಸಯ್ಯ ಎನ್ನ. ಅಕ್ಕಮಹಾದೇವಿಯಂತೆ ನಿಷ್ಕಾಮಿಯೆಂದೆನಿಸಯ್ಯ ಎನ್ನ. ಪ್ರಭುದೇವರಂತೆ ಪರಿಪೂರ್ಣನೆಂದೆನಿಸಯ್ಯ ಎನ್ನ. ಇಂತಿವರ ಕಾರುಣ್ಯದ ನಿಲವನೇ ಕರುಣಿಸಿ ನಿಮ್ಮ ಗಣಂಗಳ ಸಮ್ಮೇಳನದಲ್ಲಿರಿಸಯ್ಯ ಎನ್ನ ಅಖಂಡೇಶ್ವರಾ.