Index   ವಚನ - 192    Search  
 
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.