Index   ವಚನ - 198    Search  
 
ತಾನೇ ಗುರುವಾಗಿ ಗುರುಭಕ್ತಿಯ ಮಾಡುತಿರ್ಪನು. ತಾನೇ ಲಿಂಗವಾಗಿ ಲಿಂಗಪೂಜೆಯ ಮಾಡುತಿರ್ಪನು. ತಾನೇ ಜಂಗಮವಾಗಿ ಜಂಗಮದಾಸೋಹವ ಮಾಡುತಿರ್ಪನು. ತಾನೇ ಪಾದೋದಕ ಪ್ರಸಾದವಾಗಿ ಪಾದೋದಕ ಪ್ರಸಾದವ ಸೇವನೆಯ ಮಾಡುತಿರ್ಪನು. ತಾನೇ ವಿಭೂತಿ ರುದ್ರಾಕ್ಷಿಯಾಗಿ ವಿಭೂತಿ ರುದ್ರಾಕ್ಷಿಯ ಧರಿಸುತಿರ್ಪನು. ತಾನೇ ಮಂತ್ರವಾಗಿ ಶಿವಮಂತ್ರವ ಜಪಿಸುತಿರ್ಪನು. ಇಂತೀ ಅಷ್ಟಾವರಣವೇ ಅಂಗವಾಗಿ, ಅಷ್ಟಾವರಣವೆ ಲಿಂಗವಾಗಿ, ಅಷ್ಟಾವರಣವೇ ಸಂಗವಾಗಿ, ಅಷ್ಟಾವರಣವೇ ಸಮರಸವಾಗಿರ್ಪ ಸದ್ಭಕ್ತನು ಸಾಕ್ಷಾತ್ ಪರವಸ್ತುವು ತಾನೇ ಅಯ್ಯಾ ಅಖಂಡೇಶ್ವರಾ.