Index   ವಚನ - 258    Search  
 
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ ಭಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ: ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ, ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ, ಶ್ರೀಗುರುಸ್ವಾಮಿ ಕರುಣಿಸಿ ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ, ಆ ಲಿಂಗದಲ್ಲಿ ನಿಷ್ಠೆ ಬಲಿಯಲು ಬಾಹ್ಯ ಕರಣಂಗಳು ತರಹರವಾಗಿ, ಆ ಲಿಂಗದ ಚಿತ್‍ಕಳೆ ದೃಷ್ಟಿಸೂತ್ರದಿಂದೆ ತನ್ನ ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸುವುದು. ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ, ಭ್ರಾಂತಿಜ್ಞಾನದಿಂದೆ ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ.