ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ
ಮುಖವ ನೋಡಲಾಗದು.
ಅದೇನು ಕಾರಣವೆಂದೊಡೆ:
ಸಾಂಗೋಪಾಂಗ ಶುದ್ಧಶರೀರಿಯಾಗಿ
ಉನ್ನತಾಸನ ಗದ್ದುಗೆಯಲ್ಲಿ ಕುಳಿತು ಕಣ್ಣುಮುಚ್ಚಿ
ಅಂತರಂಗದಲ್ಲಿ ಪರಮಾತ್ಮನ ಕಳೆಯ ಧ್ಯಾನಿಸಿ
ಮನಸ್ಸಿನಲ್ಲಿ ಕಟ್ಟಿ ದೃಷ್ಟಿಗೆ ತಂದು,
ಆ ದೃಷ್ಟಿಯಿಂದ ಪುಷ್ಪದಲ್ಲಿ ತುಂಬಿ
ಮೃತ್ತಿಕೆ ಪಾಷಾಣಾದಿ ನಾನಾ ತರಹದ
ಲಿಂಗಾಕಾರದ ಮೂರ್ತಿಯ ಸ್ಥಾಪಿಸಿ, ದೇವರೆಂದು ಭಾವಿಸಿ,
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಾದಿ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನೆ ಮಾಡಿ,
ಆ ಪೂಜಾಂತ್ಯದಲ್ಲಿ ಎನ್ನ ಮಲಿನ ದೇಹದಲ್ಲಿ ನೀನು
ನಿರ್ಮಲವಾದ ವಸ್ತುವು ಇರಬೇಡ ಹೋಗೆಂದು
ತನ್ನ ದೇವರ ಬಾವಿ ಕೆರೆ ಹಳ್ಳ ಕೊಳ್ಳಾದಿ ಸ್ಥಾನಂಗಳಲ್ಲಿ ಹಾಕಿ ಬಿಡುವ
ಶಿವದ್ರೋಹಿಗಳಿಗೆ ಕುಂಭೀಪಾತಕ
ನಾಯಕ ನರಕ ತಪ್ಪದಯ್ಯ ಅಖಂಡೇಶ್ವರಾ.