ಷಡಿಂದ್ರಿಯ ಸಪ್ತಧಾತುಗಳಲ್ಲಿ
ಸಂಭ್ರಮಿಸಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು.
ಷಡ್‍ಭೂತ ಷಟ್‍ಚಕ್ರಂಗಳಲ್ಲಿ
ಇಡಿದು ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು.
ತನುತ್ರಯ ಮನತ್ರಯ ಭಾವತ್ರಯಂಗಳಲ್ಲಿ
ಭರಿತವಾಗಿರ್ಪುದು ಒಂದೇ ಪರವಸ್ತುವೆಂದರಿಯರು.
ಒಳಹೊರಗೆ ತೆರಹಿಲ್ಲದೆ
ಪರಿಪೂರ್ಣವಾಗಿ ತುಂಬಿರ್ಪುದು
ಒಂದೇ ಪರವಸ್ತುವೆಂದರಿಯರು.
ವಿಪರೀತ ಭ್ರಾಂತಿಜ್ಞಾನದಿಂದೆ
ಒಳಗೆ ಬೇರೆ ಪರವಸ್ತು ಉಂಟೆಂದು
ಕಣ್ಣಮುಚ್ಚಿ ನೋಡಿ ಕಳವಳಗೊಂಡು
ಪ್ರಳಯಕ್ಕೊಳಗಾಗಿ ಹೋದವರ ಕಂಡು
ನಗುತಿರ್ಪನು ನಮ್ಮ ಅಖಂಡೇಶ್ವರನು.