Index   ವಚನ - 269    Search  
 
ಸರ್ವಗತ ಶಿವನೆಂದು ಹೇಳುವ ಮರುಳು ಮಾನವರ ಮಾತ ಕೇಳಲಾಗದು. ಅದೆಂತೆಂದೊಡೆ: ಸರ್ವಜೀವರುಗಳಂತೆ ವನಿತಾದಿ ವಿಷಯಪ್ರಪಂಚಿನಲ್ಲಿ ಮಗ್ನವಾಗಿರ್ಪನೆ ಶಿವನು? ಸರ್ವಜೀವರುಗಳಂತೆ ತಾಪತ್ರಯಾಗ್ನಿಯಲ್ಲಿ ನೊಂದು ಬೆಂದು ಕಂದಿ ಕುಂದುವನೆ ಶಿವನು? ಸರ್ವಜೀವರುಗಳಂತೆ ಪುಣ್ಯಪಾಪ ಸುಖದುಃಖ ಸ್ವರ್ಗನರಕಂಗಳೆಂಬ ದ್ವಂದ್ವಕರ್ಮಂಗಳ ಹೊದ್ದಿರ್ಪನೆ ಶಿವನು? ಸರ್ವಜೀವರುಗಳಂತೆ ಉತ್ಪತ್ತಿ ಸ್ಥಿತಿ ಪ್ರಳಯಂಗಳೆಂಬ ಕಷ್ಟ ಬಂಧನಗಳಲ್ಲಿ ಸಿಲ್ಕಿ ಹೊದಕುಳಿಗೊಂಬನೆ ಶಿವನು? ಇಂತೀ ಭೇದವನರಿಯದೆ ಸರ್ವಗತ ಶಿವನೆಂದು ನುಡಿದ ಕಡುಪಾತಕ ಜಡಜೀವಿಗಳ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.