Index   ವಚನ - 278    Search  
 
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಮನು ಮುನಿಗಳು ಮರುಳತಾಂಡವರು ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ ಫಲಪದವ ಪಡೆದರು ತಿಳಿದು ನೋಡಿರೋ ಮಾಯಾವಾದಿಗಳು ನೀವೆಲ್ಲ. ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ. ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ ಆವ ದೇವನ ಹೊಗಳುತಿರ್ಪುವು ಹೇಳಿರೋ ಮಾಯಾವಾದಿಗಳು ನೀವೆಲ್ಲ. ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ. ಕಾಕು ದೈವದ ಗಂಡ ಲೋಕಪತಿ ಏಕೋದೇವ ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ.