Index   ವಚನ - 321    Search  
 
ಶಿವ ಶಿವಾ ಮಹಾಪ್ರಸಾದ ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ. ಎನಗೆ ಹೊನ್ನು ಬೇಡ, ಎನಗೆ ಹೆಣ್ಣು ಬೇಡ, ಎನಗೆ ಮಣ್ಣು ಬೇಡ, ಎನಗೆ ಇಹಲೋಕದ ಭೋಗ ಬೇಡ, ಪರಲೋಕದ ಮೋಕ್ಷ ಬೇಡ, ಎನಗೆ ಆವಾವ ಫಲಪದವು ಬೇಡ. ನಿಮ್ಮ ಶ್ರೀಚರಣವನೊಡಗೂಡುವ ಅವಿರಳ ಸಮರಸ ಭಕ್ತಿಜ್ಞಾನ ಪರಮವೈರಾಗ್ಯದ ಪದವನೆ ಕರುಣಿಸಿ, ಮರ್ತ್ಯದತ್ತ ಮರಳಿ ಬಾರದಂತೆ ಮಾಡಯ್ಯ ಎನ್ನ ಅಖಂಡೇಶ್ವರಾ, ನಿಮ್ಮನಿಂತು ಬೇಡಿಕೊಂಬೆನು.