Index   ವಚನ - 328    Search  
 
ಒಳಗೆ ಬೋಳಾಗಲರಿಯದೆ ಹೊರವೇಷದ ಬೋಳಿನಲ್ಲಿ ಸುಳಿದಾಡುವ ಅಣ್ಣಗಳ ಕಂಡು ಬೆರಗಾದೆನಯ್ಯ. ಅದೇನು ಕಾರಣವೆಂದೊಡೆ: ತನು ಕರಣೇಂದ್ರಿಯ ವಿಷಯಾದಿಗಳು ಘನಮಹಾಲಿಂಗದಲ್ಲಿ ತರಹರವಾಗಿರಬಲ್ಲಡೆ ಬೋಳು. ಹಮ್ಮು ಬಿಮ್ಮು ಗರ್ವ ಅಹಂಕಾರವನಳಿದು ಆದಿ ಅನಾದಿಯಿಂದತ್ತತ್ತಲಾದ ಅನುಪಮಲಿಂಗದಲ್ಲಿ ಮನವಡಗಿರಬಲ್ಲಡೆ ಬೋಳು. ಮನ ಪ್ರಾಣ ಭಾವಂಗಳು ಅನುಪಮಲಿಂಗದಲ್ಲಿ ನಿಕ್ಷೇಪವಾಗಿರಬಲ್ಲಡೆ ಬೋಳು. ಅನಂತಕೋಟಿ ಬ್ರಹ್ಮಾಂಡಗಳ ಒಳಹೊರಗೆ ತುಂಬಿ ತೊಳಗಿ ಬೆಳಗುವ ಅಖಂಡ ಪರಿಪೂರ್ಣವಾದ ಪರಬ್ರಹ್ಮದಲ್ಲಿ ಭಾವ ತುಂಬಿರಬಲ್ಲಡೆ ಬೋಳು. ಇಂತೀ ಬೋಳಿನ ಘನವನರಿಯದೆ ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು ದಿಂಡೆಯತನದಿಂದೆ ಕಂಡಕಂಡವರಲ್ಲಿ ಕೆಲೆದಾಡುತ್ತ ಮದ ಮತ್ಸರಂಗಳ ಮುಂದುಗೊಂಡು ಚರಿಸುತ್ತ ಬಂದ ಭವಂಗಳಲ್ಲಿ ಮುಳುಗಾಡುತಿರ್ಪವರ ಬೋಳುಗಳೆಲ್ಲ ಜಾಳು ಬೋಳು ನೋಡಾ ಅಖಂಡೇಶ್ವರಾ.