Index   ವಚನ - 331    Search  
 
ಈಶನ ಮರೆಯಲ್ಲಿ ವೇಷವ ತೊಟ್ಟಾಡುವರೆಲ್ಲ ಜಂಗಮವೇ? ಅಲ್ಲಲ್ಲ. ಅದೇನು ಕಾರಣವೆಂದೊಡೆ: ತಮ್ಮ ನಿಲವ ತಾವು ಕಾಣರು. ಮುನ್ನ ಹೋದ ಪುರಾತನರ ಬಟ್ಟೆಯನರಿಯರು. ಭಿನ್ನ ಪ್ರಪಂಚಿನಲ್ಲಿ ಮನೆ ಮಗ್ನವಾಗಿರ್ಪ ಭಿನ್ನ ಜೀವಿಗಳಂತಿರಲಿ. ಇನ್ನು ನಿಜಜಂಗಮದ ನಿಲವೆಂತೆಂದೊಡೆ: ತಥ್ಯಮಿಥ್ಯ ರಾಗದ್ವೇಷವನಳಿದು ಸ್ತುತಿ ನಿಂದೆ ಸಮವಾಗಿ, ಇಹಪರದ ಗತಿಯ ಕೆಡಿಸಿ, ದ್ವೈತಾದ್ವೈತಂಗಳ ನೀಗಿ, ಸತ್ಯಸದಾಚಾರವೆ ಅಂಗವಾಗಿ, ಭಕ್ತಿ ಜ್ಞಾನ ವೈರಾಗ್ಯವೆ ಭೂಷಣವಾಗಿ, ಅಂಗ ಮನ ಪ್ರಾಣ ಸಕಲ ಕರಣೇಂದ್ರಿಯಂಗಳೆಲ್ಲ ಲಿಂಗದಲ್ಲಿ ನಿಕ್ಷೇಪವಾಗಿ, ಸ್ಪಟಿಕದ ಘಟದಲ್ಲಿ ಜ್ಯೋತಿಯನಿರಿಸಿದಂತೆ, ತನ್ನೊಳಹೊರಗೆ ಮಹಾಜ್ಞಾನವೇ ತುಂಬಿ ತೊಳಗಿ ಬೆಳಗುತ್ತ ಒಡಲುಪಾಧಿಕೆಯನುರುಹಿ 'ಭಕ್ತಿಭಿಕ್ಷಾಂದೇಹಿ' ಎಂದು ಸುಳಿವ ಪರಮ ಜಂಗಮದ ಸುಳುಹೆಲ್ಲ ಜಗತ್ಪಾವನ. ಆತನ ನುಡಿಗಡಣವೆಲ್ಲ ಪರಮಬೋಧೆ. ಆತನ ದರ್ಶನ ಸ್ಪರ್ಶನವೆಲ್ಲ ಮಹಾಪುಣ್ಯವು. ಆತನು ಕೃಪೆಯಿಂದ ನೋಡಿದ ನೋಟವೆಲ್ಲ ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು. ಇಂತಪ್ಪ ಮಹಾಘನ ಪರಾತ್ಪರವಾದ ಪರಮಜಂಗಮದ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.