ನಿತ್ಯಲಿಂಗಾರ್ಚನೆಯ ಮಾಡುತ್ತ ಸದ್ ಭಕ್ತರನರಸುತ್ತ
ಭಕ್ತಿಭಿಕ್ಷವ ಬೇಡುವೆನೆಂದು ಬರುವಾಗ
ಗ್ರಾಮದ ಬಾಗಿಲಲ್ಲಿ ತಡೆವಂತೆ ಮಾಡಯ್ಯ ಎನ್ನ.
ಆರಾರು ತಡೆಯದಿರ್ದಡೆ ಆ ಗ್ರಾಮವ ಹೊಕ್ಕು
ಮನೆ ಮನೆ ತಿರಿವಂತೆ ಮಾಡಯ್ಯ ಎನ್ನ.
ಮನೆ ಮನೆ ತಿರಿದಡೆ ಎನ್ನ ಕಂಡು
ಸರ್ವರು ಅಡ್ಡಮೋರೆಯನಿಕ್ಕುವಂತೆ ಮಾಡಯ್ಯ ಎನ್ನ.
ಆ ಗ್ರಾಮವನುಳಿದು ಮತ್ತೊಂದು ಗ್ರಾಮವನರಸಿಕೊಂಡು
ಬರುವ ಬಟ್ಟೆಯಲ್ಲಿ ಜಳತಗುಲಿ ಕಳೆಕುಂದಿ ಮುಖಬಾಡಿ
ಒಡಲೊಳಗಣ ಕ್ಷುಧಾಗ್ನಿ ಢಾಳಿಸಿ ತನು ಸುಟ್ಟು ನಡೆವ ಗತಿಗೆಟ್ಟು,
ದ್ರವಗುಂದಿ ಧರೆಗೆ ಬೀಳುವಂತೆ ಮಾಡಯ್ಯ ಎನ್ನ.
ಆ ಸಮಯದಲ್ಲಿ ನಿಮ್ಮ ನೆನಹು ಮರೆದು
ಜಗದ ಭೋಗವ ಆಸೆ ಮಾಡಿದನಾದಡೆ
ಅಖಂಡೇಶ್ವರಾ, ನಿಮ್ಮ ಶ್ರೀಪಾದಕ್ಕೆ
ದೂರಸ್ಥನ ಮಾಡಯ್ಯ, ಎನ್ನ ದೇವರದೇವ.