Index   ವಚನ - 344    Search  
 
ವೀರಶೈವ ಭಕ್ತಮಾಹೇಶ್ವರರು ಅಂಗಲಿಂಗದೊಳೊಡಗೂಡುವನ್ನಬರ, ಶೀಲ ವ್ರತ ನೇಮಂಗಳ ಸೀಮೆಯ ಕಟ್ಟಿ ನಡೆಯಬೇಕೆಂದು ನುಡಿಯುತಿರ್ಪರು. ಎನಗೆ ಶೀಲ ವ್ರತ ನೇಮಂಗಳು ಆವಾವವೆಂದಡೆ: ಪರಧನ ಪರಸ್ತ್ರೀಯರ ಮುಟ್ಟೆನೆಂಬುದೆ ಎನ್ನ ಶೀಲ. ಒಡಲುಪಾಧಿಕೆಯವಿಡಿದು ಅನ್ಯರ ಅನ್ನ ವಸ್ತ್ರಂಗಳ ಬಾಯ್ದೆರದು ಬೇಡೆನೆಂಬುದೆ ಎನ್ನ ವ್ರತ. ಸಕಲ ಪದಾರ್ಥಂಗಳ ಲಿಂಗಕ್ಕೆ ಕೊಡದೆ ಎನ್ನ ಅಂಗದಿಚ್ಚೆಗೆ ಕೊಳ್ಳೆನೆಂಬುದೆ ಎನ್ನ ನೇಮ. ಇಂತೀ ಶೀಲ ವ್ರತನೇಮಂಗಳಳವಡಿಸಿಕೊಂಡು, ಎನ್ನೊಡೆಯ ಅಖಂಡೇಶ್ವರಲಿಂಗವನೊಡಗೂಡಿ ಮರಳಿಬಾರೆನೆಂಬುದೆ ಎನ್ನ ಅರುಹಿನ ಗೊತ್ತು.