ಒಂದು ವೇಳೆ ಲಿಂಗಕ್ಕೆ ಕೊಟ್ಟು
ಮತ್ತೊಂದು ವೇಳೆ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು,
ಬಂದ ಬಂದ ಪದಾರ್ಥವ ತನ್ನೊಡಲಿಚ್ಛೆಗೆ ಕೊಂಡಡೆ,
ಅಮೇಧ್ಯವನು ಕಿಲ್ಬಿಷವನು ಕೂಡಿಸಿ ತಿಂದಂತಾಯಿತ್ತು,
ಒಂದುವೇಳೆ ಪ್ರಸಾದವೆಂದು ಕೊಂಡು
ಮತ್ತೊಂದುವೇಳೆ ಎಂಜಲೆಂದು ಚೆಲ್ಲಿದಡೆ ಪ್ರಸಾದದ್ರೋಹಿ.
ಅದೆಂತೆಂದೊಡೆ:
''ಅಂಗಭೋಗಮನರ್ಪಿತಂ ಲಿಂಗಭೋಗಃ ಪ್ರಸಾದಂ |
ಎಂದು ಗುರುವಚನ.
ಇಂತಪ್ಪ ಪಂಚಮಹಾಪಾತಕರುಭಯಭ್ರಷ್ಟರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.