ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ
ಅಜ್ಞಾನದ ಗಡಣದೊಳಗು.
ಒಳಗೆ ಗುರುಲಿಂಗಜಂಗಮದ
ಪಾದತೀರ್ಥಪ್ರಸಾದವ ಕೊಂಡೆವೆಂದು
ಹೊರಗೆ ಮಾಡುವ ಭಕ್ತಿಯ ಬಿಟ್ಟರೆ
ಮುಂದೆ ಒದಗುವ ಮುಕ್ತಿಯ ಕೇಡು.
ಅದೆಂತೆಂದೊಡೆ:
ಅಸಲು ಕಳೆದ ಬಳಿಕ ಲಾಭವುಂಟೇ?
ಇಲ್ಲ ಇಲ್ಲ, ಮಾಣು.ಒಳಗಣ ಕೂಟ,
ಹೊರಗಣ ಮಾಟವನರಿಯದೆ
ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.