Index   ವಚನ - 374    Search  
 
ಆಧಾರದಲ್ಲಿ ಗುರುಸಂಬಂಧವು. ಸ್ವಾಧಿಷ್ಠಾನದಲ್ಲಿ ಲಿಂಗಸಂಬಂಧವು. ಮಣಿಪೂರಕದಲ್ಲಿ ಜಂಗಮಸಂಬಂಧವು. ಅನಾಹತದಲ್ಲಿ ಪಾದೋದಕಸಂಬಂಧವು. ವಿಶುದ್ಧಿಯಲ್ಲಿ ಪ್ರಸಾದಸಂಬಂಧವು. ಆಜ್ಞೇಯದಲ್ಲಿ ಅರುಹುಸಂಬಂಧವು. ಈ ಅರುಹುವಿಡಿದು ಗುರುವ ಕಂಡು, ಲಿಂಗವ ನೋಡಿ, ಜಂಗಮವ ಕೂಡಿ, ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು. ಈ ಅಂತರಂಗದ ವಸ್ತುವು ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ, ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ, ಪಾದೋದಕಪ್ರಸಾದ ಸೇವನೆಯ ಪ್ರೇಮವುಳ್ಳಡೆ ಬಹಿರಂಗವೆನಿಸುವುದು. ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು ನಮ್ಮ ಅಖಂಡೇಶ್ವರನು.