ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಗುರುವಿನಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಲಿಂಗದಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಜಂಗಮದಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು
ಪಾದೋದಕ ಪ್ರಸಾದಂಗಳಲ್ಲಿ.
ಇಂತಿವರಲ್ಲಿ ಶುದ್ಧ ಸುಯಿಧಾನ ಭಯ ವಿಶ್ವಾಸವಿಲ್ಲದವರು
ಸಲ್ಲರಯ್ಯಾ ನಿಮ್ಮ ನಿಜಪದಕ್ಕೆ ಅಖಂಡೇಶ್ವರಾ.