Index   ವಚನ - 403    Search  
 
ಶ್ರೀಗುರುವಿನಿಂದಧಿಕರು ಆವ ಲೋಕದೊಳಗಿಲ್ಲವಯ್ಯಾ. ಶ್ರೀಗುರುವಿನಂತೆ ಪರೋಪಕಾರಿಗಳ ಮತ್ತಾರನೂ ಕಾಣೆನಯ್ಯಾ. ಅದೆಂತೆಂದೊಡೆ: ಎನ್ನ ಕಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕಿವಿಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ನಾಸಿಕ ನಾಲಗೆಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕರಚರಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ತನುಮನಪ್ರಾಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಸಕಲಕರಣೇಂದ್ರಿಯಂಗಳ ಭಕ್ತರ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಇಂತಿವು ಮೊದಲಾಗಿ ಎನ್ನ ಸರ್ವ ಅವಯವಂಗಳನೆಲ್ಲ ಸದ್ಭಕ್ತರ ಮಾಡಿ ಲಿಂಗಾರ್ಪಿತಕ್ಕೆ ಅನುಗೊಳಿಸಿದ ಶ್ರೀಗುರುವಿನ ಮಹಾಘನ ನಿಲುವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.