Index   ವಚನ - 404    Search  
 
ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ, ಸದ್ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಭಕ್ತಿ, ಸುಗಂಧಪದಾರ್ಥ, ಗಂಧಪ್ರಸಾದ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಋಗ್ವೇದ- ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಕಾಕೃತಿ, ಮಕಾರಪ್ರಣಮ, ಸಾಧಿಷ್ಠಾನಚಕ್ರ, ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ- ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷ್ಠಿಕಭಕ್ತಿ, ಸುರಸಪದಾರ್ಥ, ಸುರಸಪ್ರಸಾದ, ಪ್ರತಿಷ್ಠಾಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಯಜುರ್ವೇದ- ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ, ನಿರಹಂಕಾರವೆ ಹಸ್ತ, ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ, ಸಾವಧಾನಭಕ್ತಿ, ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಸಾಮವೇದ- ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು. ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ, ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ, ಜಂಗಮಲಿಂಗ, ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ, ಅನುಭಾವಭಕ್ತಿ, ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ- ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು. ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ, ಸುಜ್ಞಾನವೆ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಪರಾಶಕ್ತಿ, ಆನಂದ ಭಕ್ತಿ, ಸುಶಬ್ದಪದಾರ್ಥ, ಶಬ್ದಪ್ರಸಾದ, ಶಾಂತ್ಯತೀತಕಲೆ, ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ- ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು. ಓಂಕಾರಾಕೃತಿ, ಓಂಕಾರಪ್ರಣಮ, ಆಜ್ಞೇಯಚಕ್ರ, ಐಕ್ಯನೆ ಅಂಗ, ಸದ್ಭಾವಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಚಿಚ್ಛಕ್ತಿ, ಸಮರಸಭಕ್ತಿ, ಸುತೃಪ್ತಿಪದಾರ್ಥ, ಸುತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ, ಗಾಯತ್ರಿಯೆಂಬ ವೇದ- ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು. ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ, ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.