ಎನ್ನ ತನುವಿನೊಳಗೆ ನಿಮ್ಮ ತನುವಡಗಿರ್ಪುದು;
ನಿಮ್ಮ ತನುವಿನೊಳಗೆ ಎನ್ನ ತನುವಡಗಿರ್ಪುದು.
ಎನ್ನ ಮನದೊಳಗೆ ನಿಮ್ಮ ಮನವಡಗಿರ್ಪುದು;
ನಿಮ್ಮ ಮನದೊಳಗೆ ಎನ್ನ ಮನವಡಗಿರ್ಪುದು.
ಎನ್ನ ಪ್ರಾಣದೊಳಗೆ ನಿಮ್ಮ ಪ್ರಾಣವಡಗಿರ್ಪುದು;
ನಿಮ್ಮ ಪ್ರಾಣದೊಳಗೆ ಎನ್ನ ಪ್ರಾಣವಡಗಿರ್ಪುದು.
ಎನ್ನ ಜೀವದೊಳಗೆ ನಿಮ್ಮ ಜೀವವಡಗಿರ್ಪುದು;
ನಿಮ್ಮ ಜೀವದೊಳಗೆ ಎನ್ನ ಜೀವವಡಗಿರ್ಪುದು.
ಎನ್ನ ಭಾವದೊಳಗೆ ನಿಮ್ಮ ಭಾವವಡಗಿರ್ಪುದು;
ನಿಮ್ಮ ಭಾವದೊಳಗೆ ಎನ್ನ ಭಾವವಡಗಿರ್ಪುದು.
ಎನ್ನ ಕರಣಂಗಳೊಳಗೆ ನಿಮ್ಮ ಕರಣಂಗಳಡಗಿರ್ಪುವು;
ನಿಮ್ಮ ಕರಣಂಗಳೊಳಗೆ ಎನ್ನ ಕರಣಂಗಳಡಗಿರ್ಪುವು.
ಎನ್ನ ಇಂದ್ರಿಯಂಗಳೊಳಗೆ ನಿಮ್ಮ ಇಂದ್ರಿಯಂಗಳಡಗಿರ್ಪುವು;
ನಿಮ್ಮ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಡಗಿರ್ಪುವು.
ಎನ್ನ ವಿಷಯಂಗಳೊಳಗೆ ನಿಮ್ಮ ವಿಷಯಂಗಳಡಗಿರ್ಪುವು;
ನಿಮ್ಮ ವಿಷಯಂಗಳೊಳಗೆ ಎನ್ನ ವಿಷಯಂಗಳಡಗಿರ್ಪುವು.
ನಾನು ನೀನೆಂಬ ಭಿನ್ನಭಾವವಳಿದು
ಪುಷ್ಪಪರಿಮಳದಂತೆ, ರೂಪುರುಚಿಯಂತೆ
ಅವಿರಳ ಸಮರಸವಾಗಿರ್ದೆನಯ್ಯಾ ಅಖಂಡೇಶ್ವರಾ.