Index   ವಚನ - 419    Search  
 
ಕರಸ್ಥಲದ ಲಿಂಗವನು ಮನಸ್ಥಲದಲ್ಲಿ ಕುಳ್ಳಿರಿಸಿ, ಘ್ರಾಣವೆಂಬ ಭಾಜನದಲ್ಲಿ ಸುಗಂಧ ಪದಾರ್ಥವ ಗಡಣಿಸಿ ಸುಚಿತ್ತವೆಂಬ ಹಸ್ತದಿಂದರ್ಪಿಸಿ, ಆ ಸುಗಂಧ ಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಜಿಹ್ವೆಯೆಂಬ ಭಾಜನದಲ್ಲಿ ಸುರಸಪದಾರ್ಥವ ಗಡಣಿಸಿ, ಸುಬುದ್ಧಿಯೆಂಬ ಹಸ್ತದಿಂದರ್ಪಿಸಿ, ಆ ಸುರಸಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ನೇತ್ರವೆಂಬ ಭಾಜನದಲ್ಲಿ ಸುರೂಪುಪದಾರ್ಥವ ಗಡಣಿಸಿ, ನಿರಹಂಕಾರವೆಂಬ ಹಸ್ತದಿಂದರ್ಪಿಸಿ, ಆ ಸುರೂಪುಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ತ್ವಕ್ಕೆಂಬ ಭಾಜನದಲ್ಲಿ ಸುಸ್ಪರ್ಶನ ಪದಾರ್ಥವ ಗಡಣಿಸಿ, ಸುಮನವೆಂಬ ಹಸ್ತದಿಂದರ್ಪಿಸಿ, ಆ ಸುಸ್ಪರ್ಶನಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಶ್ರೋತ್ರವೆಂಬ ಭಾಜನದಲ್ಲಿ ಸುಶಬ್ದಪದಾರ್ಥವ ಗಡಣಿಸಿ, ಸುಜ್ಞಾನವೆಂಬ ಹಸ್ತದಿಂದರ್ಪಿಸಿ, ಆ ಸುಶಬ್ದಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಹೃದಯವೆಂಬ ಭಾಜನದಲ್ಲಿ ಸುತೃಪ್ತಿ ಪದಾರ್ಥವ ಗಡಣಿಸಿ, ಸದ್ಭಾವವೆಂಬ ಹಸ್ತದಿಂದರ್ಪಿಸಿ, ಆ ಸುತೃಪ್ತಿಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ. ಇಂತೀ ಷಡಿಂದ್ರಿಯಂಗಳೆಂಬ ಷಡ್ವಿಧ ಭಾಜನದಲ್ಲಿ ಷಡ್ವಿಧ ಪದಾರ್ಥವ ಗಡಣಿಸಿ ಷಡ್ವಿಧ ಹಸ್ತದಿಂದರ್ಪಿಸಿ, ಷಡ್ವಿಧ ಪ್ರಸಾದವ ಗ್ರಹಿಸಲರಿಯದೆ ಬರಿದೆ ಪ್ರಸಾದಿಗಳೆಂದಡೆ ನಗುವನಯ್ಯಾ ನಮ್ಮ ಅಖಂಡೇಶ್ವರನು.