Index   ವಚನ - 457    Search  
 
ನವಖಂಡ ಮಂಡಲದೊಳಗೊಂದು ಪುಂಡರೀಕವೆಂಬ ಹುತ್ತವಿರ್ಪುದು. ಆ ಹುತ್ತದೊಳಗೊಂದು ವಿಚಿತ್ರ ಸರ್ಪವಿರ್ಪುದು. ಆ ಸರ್ಪನ ಬಾಯೊಳಗೊಂದು ಬೆಲೆಯಿಲ್ಲದ ರತ್ನವಿರ್ಪುದು. ಈ ರತ್ನದ ಬೆಳಗಿನೊಳಗೆ ಈರೇಳುಲೋಕದ ಸುಳುಹಿರ್ಪುದನಾರೂ ಅರಿಯರಲ್ಲ! ಆ ಹುತ್ತವ ಕೆಡಿಸದೆ ಸರ್ಪನ ಕೊಂದು ರತ್ನವ ಸಾಧ್ಯಮಾಡಿಕೊಂಡಾತನೆ ಮುಕ್ತಿರಾಜ್ಯಕ್ಕೆ ಅರಸನಪ್ಪನಯ್ಯಾ ಅಖಂಡೇಶ್ವರಾ.