Index   ವಚನ - 487    Search  
 
ಇನ್ನು ಹಠಯೋಗಕ್ಕೆ ಸಾಧನಮಾದ ಬಂಧತ್ರಯಂಗಳ ಭೇದವೆಂತೆಂದೊಡೆ: ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ ಬಲಪಾದಮಂ ನೀಡಿ, ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು, ಕಂಠಸ್ಥಾನದಲ್ಲಿ ಚುಬುಕವನಿರಿಸಿ, ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು. ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ, ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ ವಾಯುಪೂರಣಮಂ ಮಾಡಿ, ಜಾಲಂಧರಮಂ ಬಂಧಿಸುವುದೆ ಮಹಾಬಂಧವೆನಿಸುವುದು. ನಾಬ್ಥಿಯ ಊರ್ಧ್ವ ಅಧೋಭಾಗಂಗಳನು ಬಲಾತ್ಕಾರದಿಂ ಬಂಧಿಪುದೆ ಉಡ್ಯಾಣಬಂಧವೆನಿಸುವುದು. ಈ ಬಂಧತ್ರಯಂಗಳಿಂದೆ ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ.