Index   ವಚನ - 489    Search  
 
ಬಳಿಕ ನಿಯಮದ ಲಕ್ಷಣವೆಂತೆಂದೊಡೆ: ಸಕಲ ವಿಷಯಂಗಳಲ್ಲಿ ಉದಾಸೀನತ್ವವು. ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು. ಸತ್‍ಕೃತ್ಯದಲ್ಲಿ ಎರಕತೆಯು. ದೇಹಶೋಷಣರೂಪವಾದ ತಪವು. ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು. ಭಸ್ಮನಿಷ್ಠಾದಿ ವ್ರತವು, ಶಿವಲಿಂಗಾರ್ಚನೆಯು. ಪ್ರಣವ ಪಂಚಾಕ್ಷರಾದಿ ಮಂತ್ರಜಪವು. ಲೋಕವಿರುದ್ಧ ವೇದವಿರುದ್ಧವಾದ ಮಾರ್ಗಂಗಳಲ್ಲಿ ಮನವೆರಗದಿಹುದು. ಯೋಗಶಾಸ್ತ್ರಂಗಳ ಕೇಳುವುದು. ಸತ್‍ಪಾತ್ರದಾನಯುಕ್ತವಾಗಿಹುದು ನಿಯಮಯೋಗ ನೋಡಾ ಅಖಂಡೇಶ್ವರಾ.