Index   ವಚನ - 515    Search  
 
ಎನ್ನ ಆಧಾರದಲ್ಲಿ ಅರವತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಸ್ವಾಧಿಷ್ಠಾನದಲ್ಲಿ ಎಪ್ಪತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಮಣಿಪೂರಕದಲ್ಲಿ ಎಂಭತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಅನಾಹತದಲ್ಲಿ ತೊಂಭತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ವಿಶುದ್ಧಿಯಲ್ಲಿ ನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಆಜ್ಞೇಯದಲ್ಲಿ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಬ್ರಹ್ಮರಂಧ್ರದಲ್ಲಿ ಅಗಣಿತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಎನ್ನ ಶಿಖಾಚಕ್ರದಲ್ಲಿ ಅಖಂಡ ಬೆಳಗನೊಳಕೊಂಡು ಬೆಳಗುತಿರ್ಪಿರಯ್ಯಾ ನೀವು. ಇಂತು ಎನ್ನೊಳಗೆ ಥಳಥಳಿಸಿ ಬೆಳಗುವ ಬೆಳಗಿನ ಬೆಳಗು ಮಹಾಬೆಳಗಿನೊಳಗೆ ಮುಳುಗಿ ಎನ್ನಂಗದ ಕಳೆಯಳಿದಿರ್ದೆನಯ್ಯಾ ಅಖಂಡೇಶ್ವರಾ.