Index   ವಚನ - 514    Search  
 
ಪ್ರಾಣಲಿಂಗಸಂಬಂಧಿಗಳೆಂದು ನುಡಿಯುವವರು ಅನೇಕರುಂಟು: ಪ್ರಾಣಲಿಂಗದ ಕಳೆಯನಾರೂ ಅರಿಯರಲ್ಲ! ಪ್ರಾಣಲಿಂಗದ ಕಳೆ ಎಂತೆಂದಡೆ: ಆಧಾರದಲ್ಲಿ ಎಳೆಯ ಸೂರ್ಯನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಸ್ವಾಧಿಷ್ಠಾನದಲ್ಲಿ ಪೂರ್ಣಚಂದ್ರನಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಮಣಿಪೂರಕದಲ್ಲಿ ಮಿಂಚಿನಲತೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಅನಾಹತದಲ್ಲಿ ಸ್ಫಟಿಕದ ಸಲಾಕೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ವಿಶುದ್ಧಿಯಲ್ಲಿ ಮೌಕ್ತಿಕದ ಗೊಂಚಲದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಆಜ್ಞೇಯದಲ್ಲಿ ರತ್ನದ ದೀಪ್ತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಶಿಖೆಯಲ್ಲಿ ಶುದ್ಧತಾರೆಯಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಪಶ್ಚಿಮದಲ್ಲಿ ಉಳುಕ ನಕ್ಷತ್ರದಂತೆ ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು. ಇಂತಪ್ಪ ಪ್ರಾಣಲಿಂಗದ ಕಳೆಯನರಿಯದೆ ಪ್ರಾಣನ ಸಂಯೋಗಿಸಿ ಪ್ರಳಯವ ಗೆಲಲರಿಯದೆ ಮಾತಿನ ಮಾಲೆಯ ನುಡಿದು ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು ಒಡಲ ಹೊರೆವ ಉದರಘಾತಕರ ಪ್ರಾಣಲಿಂಗಸಂಬಂಧಿಗಳೆಂತೆಂಬೆನಯ್ಯಾ ಅಖಂಡೇಶ್ವರಾ.