Index   ವಚನ - 520    Search  
 
ಕೇಳು ಕೇಳಯ್ಯ ಪ್ರಾಣನಾಥನೆ, ಎನ್ನ ಪ್ರಾಣಪೂಜೆಯ ಬಗೆಯ ಬಣ್ಣಿಸುತಿರ್ಪೆನು ಅವಧರಿಸಯ್ಯಾ ಸ್ವಾಮಿ. ಎನ್ನ ಕಾಯವೆ ಕೈಲಾಸವಯ್ಯ ನಿಮಗೆ. ಎನ್ನ ಮನವೆ ಶೃಂಗಾರಮಂಟಪವಯ್ಯ ನಿಮಗೆ. ಎನ್ನ ಭಾವವೆ ಶೂನ್ಯಸಿಂಹಾಸನವಯ್ಯಾ ನಿಮಗೆ. ಎನ್ನ ಪರಮಾನಂದವೆ ಮಜ್ಜನವಯ್ಯಾ ನಿಮಗೆ. ಎನ್ನ ಪರಮಶಾಂತಿಯೆ ಗಂಧವಯ್ಯಾ ನಿಮಗೆ. ಎನ್ನ ನಿರಹಂಕಾರವೆ ಅಕ್ಷತೆಯಯ್ಯಾ ನಿಮಗೆ. ಎನ್ನ ಅವಿರಳವೆ ಪುಷ್ಪದ ಮಾಲೆಯಯ್ಯಾ ನಿಮಗೆ. ಎನ್ನ ಸ್ವಾನುಭಾವವೆ ಧೂಪವಯ್ಯಾ ನಿಮಗೆ. ಎನ್ನ ದಿವ್ಯಜ್ಞಾನವೆ ದೀಪದ ಗಡಣವಯ್ಯಾ ನಿಮಗೆ. ಎನ್ನ ಸುಚರಿತ್ರವೆ ಸರ್ವವಸ್ತ್ರವಯ್ಯಾ ನಿಮಗೆ. ಎನ್ನ ಸುವಿವೇಕವೆ ಸಕಲಾಭರಣವಯ್ಯಾ ನಿಮಗೆ. ಎನ್ನ ಆತ್ಮವೆ ಪರಮಾಮೃತದ ನೈವೇದ್ಯವಯ್ಯಾ ನಿಮಗೆ. ಎನ್ನ ಪರಿಣಾಮವೆ ಹಸ್ತೋದಕವಯ್ಯಾ ನಿಮಗೆ. ಎನ್ನ ಸದ್ಭಕ್ತಿರಾಗರಸವೆ ತಾಂಬೂಲವಯ್ಯಾ ನಿಮಗೆ. ಎನ್ನ ನಿರ್ಮಲವೆ ದರ್ಪಣವಯ್ಯಾ ನಿಮಗೆ. ಎನ್ನ ಸತ್ಯವೆ ಘಂಟೆಯಯ್ಯಾ ನಿಮಗೆ. ಎನ್ನ ಸದಾನಂದವೆ ಶಂಖವಾದ್ಯವಯ್ಯಾ ನಿಮಗೆ. ಎನ್ನ ಸಮತೆಯೆ ಚಾಮರವಯ್ಯಾ ನಿಮಗೆ. ಎನ್ನ ಕ್ಷಮೆಯೆ ಆಲವಟ್ಟವಯ್ಯಾ ನಿಮಗೆ. ಎನ್ನ ಸುಮನವೆ ವಾಹನವಯ್ಯಾ ನಿಮಗೆ. ಎನ್ನ ಸುಬುದ್ಧಿಯೆ ಜಗಜಂಪನವಯ್ಯಾ ನಿಮಗೆ. ಎನ್ನ ಸುಚಿತ್ತವೆ ನಂದಿಧ್ವಜವಯ್ಯಾ ನಿಮಗೆ. ಎನ್ನ ಸುಜ್ಞಾನವೆ ಶೃಂಗಾರದ ಪಲ್ಲಕ್ಕಿಯಯ್ಯಾ ನಿಮಗೆ. ಎನ್ನ ನುಡಿಗಡಣವೆ ಮಂಗಳಸ್ತೋತ್ರವಯ್ಯಾ ನಿಮಗೆ. ಎನ್ನ ಸುಳುಹಿನ ಸಂಚಾರವೆ ಪ್ರದಕ್ಷಿಣೆಯಯ್ಯಾ ನಿಮಗೆ. ಎನ್ನ ಮಂತ್ರೋಚ್ಚರಣವೆ ನಮಸ್ಕಾರವಯ್ಯಾ ನಿಮಗೆ. ಎನ್ನ ಸಕಲಕರಣಂಗಳಿಂದೆ ಮಾಡುವ ಸೇವೆಯೆ ನಾನಾ ತೆರದ ಉಪಚಾರವಯ್ಯಾ ನಿಮಗೆ. ಇಂತೀ ಪ್ರಾಣಪೂಜೆಯ ನಿರಂತರ ತೆರಹಿಲ್ಲದೆ ನಿಮಗಳವಡಿಸಿ ನಾ ನಿಮ್ಮೊಳಡಗಿರ್ದೆನಯ್ಯಾ ಅಖಂಡೇಶ್ವರಾ.