ಒಳಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ.
ಹೊರಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ.
ಒಳಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ.
ಹೊರಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ.
ಒಳಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ.
ಹೊರಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ.
ನೀವು ಭಕ್ತ್ಯನುಕಂಪಿತರಾದ ಕಾರಣ
ಎನ್ನ ಭಾವವು ಎಲ್ಲಿ ನಿಂದಿಹುದು ಅಲ್ಲಿ
ನಿಮ್ಮ ನಿಲವೆ ತುಂಬಿರ್ಪುದಯ್ಯಾ ಅಖಂಡೇಶ್ವರಾ.