Index   ವಚನ - 534    Search  
 
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ. ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ. ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ. ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ. ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಾದತೀರ್ಥದ ಘನವ ಕಂಡು ತನು ಕರಗಿ ಮನ ಹಿಗ್ಗಿ ಹೃದಯ ಪಸರಿಸಿ ಅಂತರಂಗದಲ್ಲಿ ವಿಶ್ವಾಸ ತುಂಬಿ, ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ, ಆ ಮಹಾಘನ ಪರಾತ್ಪರವಾದ ಪಾದತೀರ್ಥವನು ಹದುಳಿಗಚಿತ್ತನಾಗಿ ಹರ್ಷಾನಂದದಿಂ ಸೇವನೆಯಮಾಡಿ ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ, ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ.