Index   ವಚನ - 535    Search  
 
ಜಂಗಮದ ಪಾದತೀರ್ಥವು ಭವರೋಗವೈದ್ಯವಯ್ಯಾ. ಜಂಗಮದ ಪಾದತೀರ್ಥವು ಶಿವಸಾಯುಜ್ಯವಯ್ಯಾ. ಜಂಗಮದ ಪಾದತೀರ್ಥವು ಜೀವನ್ಮುಕ್ತಿಯಯ್ಯಾ. ಜಂಗಮದ ಪಾದತೀರ್ಥವು ಆಧಿ ವ್ಯಾಧಿ ವಿಪತ್ತು ರೋಗರುಜಿನಂಗಳ ಶೋಧಿಸಿ ಕಿತ್ತು ಬಿಸುಟುವುದಯ್ಯಾ. ಜಂಗಮದ ಪಾದತೀರ್ಥವು ಅಂಗದ ಅವಗುಣವ ಕಳೆವುದಯ್ಯಾ. ಜಂಗಮದ ಪಾದತೀರ್ಥವು ಲಿಂಗಕ್ಕೆ ಕಳೆಯನಿಪ್ಪುದಯ್ಯಾ. ಇಂತಪ್ಪ ಜಂಗಮದ ಪಾದತೀರ್ಥಕ್ಕೆ ಭಕ್ತನಾದಡೂ ಆಗಲಿ ಮಹೇಶ್ವರನಾದಡೂ ಆಗಲಿ ಆರಾದಡೇನು ಅಡಿಯಿಟ್ಟು ನಡೆದು ಬಂದು ಭಯಭಕ್ತಿಯಿಂದೆ ಅಡ್ಡಬಿದ್ದು, ಜಂಗಮದ ಪಾದತೀರ್ಥವನು ಶುದ್ಧ ಸಾವಧಾನದಿಂದೆ ತನ್ನ ಲಿಂಗಕ್ಕೆ ಅರ್ಪಿಸಿ, ಅಂಗಕ್ಕೆ ಕೊಳ್ಳಬಲ್ಲಡೆ, ಆ ಮಹಾತ್ಮನೆ ಆದಿಪುರಾತನನೆಂಬೆ; ಅಭೇದ್ಯ ಭೇದಕನೆಂಬೆ. ಹೀಗಲ್ಲದೆ ಭಕ್ತಿಹೀನನಾಗಿ, ಯುಕ್ತಿಶೂನ್ಯನಾಗಿ, ಗರ್ವದ ಪರ್ವತವನೇರಿ ಹೆಮ್ಮೆ ಹಿರಿತನವು ಮುಂದುಗೊಂಡು ಆ ಜಂಗಮದ ಪಾದತೀರ್ಥವನು ಕಾಲಿಲ್ಲದ ಹೆಳವನಂತೆ ತಾನಿದ್ದಲ್ಲಿಗೆ ತರಿಸಿಕೊಂಡು ಅವಿಶ್ವಾಸದಿಂದೆ ಕೊಂಬ ಜೀವಗಳ್ಳರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.