Index   ವಚನ - 537    Search  
 
ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ. ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ, ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ, ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ. ಅದೆಂತೆನಲು: ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ, ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ, ಈ ಹದಿನೈದು ಭಕ್ತಸ್ಥಲಂಗಳು. ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ, ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ, ಸ್ವಯಸ್ಥಲ, ಚರಸ್ಥಲ, ಪರಸ್ಥಲ, ಈ ಒಂಬತ್ತು ಆಚಾರಲಿಂಗಸ್ಥಲಂಗಳು. ಇಂತೀ ಉಭಯ ಸ್ಥಲವು ಕೂಡಿ 24 ಸ್ಥಲಂಗಳಾಗಿ, ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು. ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ, ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ, ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ, ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ, ಈ ಒಂಬತ್ತು ಮಹೇಶ್ವರಸ್ಥಲಂಗಳು. ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ, ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ, ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ, ಈ ಒಂಬತ್ತು ಗುರುಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 18 ಸ್ಥಲಂಗಳಾಗಿ, ಸ್ವಾಧಿಷ್ಠಾನಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ, ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ, ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ, ಈ ಏಳು ಪ್ರಸಾದಿಸ್ಥಲಂಗಳು. ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ, ಈ ಒಂಬತ್ತು ಶಿವಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 16 ಸ್ಥಲಂಗಳಾಗಿ, ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು. ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ, ಶಿವಯೋಗಸಮಾಧಿಸ್ಥಲ, ಲಿಂಗನಿಜಸ್ಥಲ, ಅಂಗಲಿಂಗಸ್ಥಲ, ಈ ಐದು ಪ್ರಾಣಲಿಂಗಿಸ್ಥಲಂಗಳು, ಜೀವಾತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ, ನಿರ್ದೇಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ, ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ, ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಈ ಹನ್ನೆರಡು ಜಂಗಮಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 17 ಸ್ಥಲಂಗಳಾಗಿ, ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು. ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೇಶಸ್ಥಲ, ಶೀಲಸಂಪಾದನಾಸ್ಥಲ, ಈ ನಾಲ್ಕು ಶರಣಸ್ಥಲಂಗಳು. ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು. ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ, ಏಕಭಾಜನಸ್ಥಲ, ಸಹಭೋಜನಸ್ಥಲ, ಈ ನಾಲ್ಕು ಐಕ್ಯಸ್ಥಲಂಗಳು. ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ, ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ, ಈ ಒಂಬತ್ತು ಮಹಾಲಿಂಗಸ್ಥಲಂಗಳು. ಇಂತೀ ಉಭಯಸ್ಥಲವು ಕೂಡಿ 13 ಸ್ಥಲಂಗಳಾಗಿ, ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು. ಇಂತೀ 101 ಸ್ಥಲಕುಳಂಗಳು ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ, ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ, ಆ ಆರು ಚಕ್ರಂಗಳನು ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ, ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ ಗುರುಲಿಂಗಜಂಗಮವ ಕುಳ್ಳಿರಿಸಿ, ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ, ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು ಆ ಗುರುಲಿಂಗಜಂಗಮವು ಒಂದಾದ ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ ಮಹಾಶರಣರ ಪರಮಗುರು ಬಸವರಾಜದೇವರ ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.