Index   ವಚನ - 556    Search  
 
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ, ನಾನು ಶರಣ ತಾನು ಶರಣನೆಂದು ನುಡಿವ ಕರ್ಮಜೀವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ: ತಾವು ಶರಣರಾದಡೆ ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು. ತಾವು ಶರಣರಾದಡೆ ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು. ತಾವು ಶರಣರಾದಡೆ ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು. ತಾವು ಶರಣರಾದಡೆ ನಿತ್ಯಾನಿತ್ಯವನರಿದು ತತ್ತ್ವಾತತ್ತ್ವಂಗಳ ವ್ಯಕ್ತೀಕರಿಸಿ ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು. ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ, ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ.