ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ?
ಬೀಜವಿಲ್ಲದ ಬಳಿಕ ವೃಕ್ಷವಿನ್ನೆಲ್ಲಿಯದೊ?
ಹಾಲಿಲ್ಲದ ಬಳಿಕ ತುಪ್ಪವಿನ್ನೆಲ್ಲಿಯದೊ?
ಪರಮ ಶ್ರೀಗುರುವಿನುಪದೇಶವಿಲ್ಲದ ಬಳಿಕ
ಲಿಂಗಕ್ಕೆ ಪರಮಶಿವಕಳೆಯಿನ್ನೆಲ್ಲಿಯದೊ?
ಇದು ಕಾರಣ,
ಉಪದೇಶವಿಲ್ಲದ ಲಿಂಗ ಜಡಪಾಷಾಣವೆಂದೆನಿಸಿತ್ತು.
ಆ ಜಡಪಾಷಾಣವ ಅನಂತಕೋಟಿವರ್ಷ
ಪೂಜೆಯ ಮಾಡಿದರು ವ್ಯರ್ಥವಲ್ಲದೆ
ಸಾರ್ಥಕವಿಲ್ಲ ನೋಡಾ!
ಇಂತೀ ಭೇದವನರಿಯದೆ
ಮೂಢಮತಿಯಿಂದೆ ಜಡಪಾಷಾಣವ ಪೂಜಿಸಿ
ಈಷಣತ್ರಯವೆಂಬ ಸಂಕೋಲೆಯಲ್ಲಿ ಬಂಧನವಡೆದು
ಭವದಲ್ಲಿ ಘಾಸಿಯಾಗುವ ಹೇಸಿಮೂಳರ ಕಂಡು
ನಾಚಿತ್ತಯ್ಯಾ ಎನ್ನ ಮನವು ಅಖಂಡೇಶ್ವರಾ.