ಗುರುದೀಕ್ಷೆಯಿಲ್ಲದ ಲಿಂಗವು ಧರೆಯ ಕಲ್ಲೆನಿಸಿತ್ತು.
ಗುರುದೀಕ್ಷೆಯಿಲ್ಲದ ನರನು ಶರಣರ ಸಮಯಕ್ಕೆ ಸಲ್ಲ.
ಅದೆಂತೆಂದೊಡೆ:
ಸುಟ್ಟ ಮಡಿಕೆಯಲ್ಲಿ ನೀರ ತುಂಬಿದಡೆ
ದಿಟವಾಗಿ ನಿಲ್ಲುವುದಲ್ಲದೆ,
ಹಸಿಯಮಡಿಕೆಯಲ್ಲಿ ನೀರತುಂಬಿದಡೆ
ದಿಟವಾಗಿ ನಿಲ್ಲುವುದೆ ಹೇಳಾ?
ಇದು ಕಾರಣ,
ಗುರುದೀಕ್ಷೆಯಿಲ್ಲದವ ಎಷ್ಟು ಜ್ಞಾನಿಯಾದಡು
ಅವನ ಜ್ಞಾನವು ಪ್ರಯೋಜನಕ್ಕೆಬಾರದು.
ಅವನು ಎಷ್ಟು ಕ್ರಿಯೆಯನಾಚರಿಸಿದಡು
ಅವನ ಕ್ರಿಯೆಯು ನಿಷ್ಫಲ ನೋಡಾ ಅಖಂಡೇಶ್ವರಾ.