ಶ್ರೀಗುರುವಿನ ಕರಗರ್ಭದಲ್ಲಿ ಉದಯವಾದ
ಶರಣಸತಿ ನಾನು.
ಶ್ರೀಗುರುವಿನ ಹೃದಯಗರ್ಭದಲ್ಲಿ
ಉದಯವಾದ ಲಿಂಗಪತಿಗೆ
ಎನ್ನ ಮದುವೆಯ ಮಾಡುವ ಕಾಲದಲ್ಲಿ
ಸಹಸ್ರದಳಕಮಲವೆಂಬ
ಸಾವಿರಕಂಬದ ಮಂಟಪವ ರಚಿಸಿ,
ಆ ಮಂಟಪದ ಮಧ್ಯದಲ್ಲಿ
ಪಂಚಪಾತ್ರವೆಂಬ ಪಂಚಮುದ್ರೆಯ ರಂಗವಲ್ಲಿಯ ತುಂಬಿ,
ಆ ಪಂಚಮುದ್ರೆಯಲ್ಲಿ ಪಂಚಪ್ರಣವೆಂಬ ಪಂಚಕಲಶವ ಹೂಡಿ,
ಆ ಪಂಚಕಲಶಂಗಳಿಗೆ ಸ್ವಾನುಭಾವಜ್ಞಾನವೆಂಬ ಸುರಗಿಯ ಸುತ್ತಿ,
ಆ ಮಧ್ಯದಲ್ಲಿ ಎನಗೆ ಶೃಂಗಾರವ ಮಾಡಿದರೆಂತೆನಲು,
ಸರ್ವಾಚಾರಸಂಪತ್ತೆಂಬ ಸೀರೆಯನುಡಿಸಿ,
ಸುಜ್ಞಾನವೆಂಬ ಕುಪ್ಪಸವ ತೊಡಿಸಿ,
ಸದ್ಭಕ್ತಿಯೆಂಬ ಬಳೆಯನಿಡಿಸಿ,
ಏಕಭಾವದ ನಿಷ್ಠೆಯೆಂಬ ತಾಳಿಯ ಕಟ್ಟಿ,
ನಿಜಮುಕ್ತಿಯೆಂಬ ಮೂಗುತಿಯನಿಟ್ಟು
ಶಿವಮಂತ್ರವೆಂಬ ಕರ್ಣಾಭರಣವ ಧರಿಸಿ,
ಸತ್ಕ್ರಿಯೆಯೆಂಬ ಪಾದಾಭರಣವ ಧರಿಸಿ,
ಪರಮೇಶ್ವರನ ಚಿತ್‍ಪ್ರಕಾಶವೆಂಬ ಚಿದ್‍ವಿಭೂತಿಯನೆ ತಂದು,
ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಿ,
ಸತಿಸಂಗವಗಲಬೇಡವೆಂದು
ಎನ್ನ ಪತಿಯ ಸೆರಗ ತಂದು ಎನ್ನ ಸೆರಗಿಗೆ ಕೂಡಿಸಿ,
ಷಟ್‍ಸ್ಥಲಬ್ರಹ್ಮಗಂಟನಿಕ್ಕಿ,
ಪತಿಭಕ್ತಿಯಗಲದಿರೆಂದು ಎನ್ನ ಮುಂಗೈಯಲ್ಲಿ
ಸಕಲಗಣಂಗಳ ಸಾಕ್ಷಿಯಾಗಿ ಬಿರುದಿನ ವೀರಕಂಕಣವ ಕಟ್ಟಿ,
ಜಂಗಮದ ಪಾದತೀರ್ಥ ಪ್ರಸಾದವೆಂಬ ಭೂಮವನುಣಿಸಿ,
ಮದುವೆಯ ಮಾಡಿದರಂದು.
ಇಂದು ಎನಗೆ ಯೌವನವಾಯಿತ್ತು.
ಏಳುನೆಲೆಯ ಮೇಲುಪ್ಪರಿಗೆಯ ಮೇಲೆ
ಲೀಲೆಯಿಂದ ಕೂಡಿ ಸುಖಿಸಯ್ಯಾ ಎನ್ನ ಅಖಂಡೇಶ್ವರಾ.
Art
Manuscript
Music
Courtesy:
Transliteration
Śrīguruvina karagarbhadalli udayavāda
śaraṇasati nānu.
Śrīguruvina hr̥dayagarbhadalli
udayavāda liṅgapatige
enna maduveya māḍuva kāladalli
sahasradaḷakamalavemba
sāvirakambada maṇṭapava racisi,
ā maṇṭapada madhyadalli
pan̄capātravemba pan̄camudreya raṅgavalliya tumbi,
ā pan̄camudreyalli pan̄capraṇavemba pan̄cakalaśava hūḍi,
ā pan̄cakalaśaṅgaḷige svānubhāvajñānavemba suragiya sutti,
ā madhyadalli enage śr̥ṅgārava māḍidarentenalu,
Sarvācārasampattemba sīreyanuḍisi,
sujñānavemba kuppasava toḍisi,
sadbhaktiyemba baḷeyaniḍisi,
ēkabhāvada niṣṭheyemba tāḷiya kaṭṭi,
nijamuktiyemba mūgutiyaniṭṭu
śivamantravemba karṇābharaṇava dharisi,
satkriyeyemba pādābharaṇava dharisi,
paramēśvarana citprakāśavemba cidvibhūtiyane tandu,
enna lalāṭadalli paṭṭava kaṭṭi,
satisaṅgavagalabēḍavendu
enna patiya seraga tandu enna seragige kūḍisi,
ṣaṭsthalabrahmagaṇṭanikki,
Patibhaktiyagaladirendu enna muṅgaiyalli
sakalagaṇaṅgaḷa sākṣiyāgi birudina vīrakaṅkaṇava kaṭṭi,
jaṅgamada pādatīrtha prasādavemba bhūmavanuṇisi,
maduveya māḍidarandu.
Indu enage yauvanavāyittu.
Ēḷuneleya mēlupparigeya mēle
līleyinda kūḍi sukhisayyā enna akhaṇḍēśvarā.