Index   ವಚನ - 569    Search  
 
ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು ಹುಟ್ಟಿ ಸುತ್ತಿಸುಳಿದು ಸುಖದುಃಖಗಳಿಂದೆ ನೊಂದು ಬೆಂದು ತೊಳಲಿ ಬಳಲುವ ಜೀವಂಗೆ, ಬಡವಂಗೆ ಕಡವರ ದೊರೆಕೊಂಡಂತೆ, ಮನುಷ್ಯದೇಹವು ದೊರೆಕೊಂಡಲ್ಲಿ, ಶಿವಕೃಪೆಯಿಂದ ಗುರುಕಾರುಣ್ಯವಾಗಿ ಅಂಗದ ಮೇಲೆ ಲಿಂಗಧಾರಣವಾದ ಬಳಿಕ ಆ ಲಿಂಗದ ಮೇಲೆ ಪ್ರಾಣಪ್ರತಿಷ್ಠೆಯಂ ಮಾಡಿ ನಿಮಿಷ ನಿಮಿಷಾರ್ಧವಗಲದಿರಬೇಕು. ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ ಸತ್ಕ್ರಿಯಾ ಸಮ್ಯಕ್‍ಜ್ಞಾನವ ಬಿಡದಿರಬೇಕು. ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ, ಅಂತರಂಗದಲ್ಲಿ ಅಂತಃಪ್ರಾಣಲಿಂಗದ ಪರಿಪೂರ್ಣ ಬೆಳಗ ಕಂಡೆವು. ಇನ್ನು ಇಷ್ಟಲಿಂಗದ ಹಂಗು ಏತಕೆಂದು ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ ಬಂಧನಬಡುತಿರ್ಪನಲ್ಲದೆ ಶಿವನಲ್ಲಿ ಅವಿರಳ ಸಮರಸವಿಲ್ಲ ನೋಡಾ! ಅದೆಂತೆಂದೊಡೆ: ``ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ | ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||'' ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ.