Index   ವಚನ - 616    Search  
 
ತಾಮಸಗುಣಂಗಳಲ್ಲಿ ಬಿದ್ದು, ತ್ವರಿತದ ವಿಷಯದಲ್ಲಿ ಹರಿದಾಡಿ, ಭವಜಾಲದಲ್ಲಿ ಸತ್ತು ಹುಟ್ಟುವಾತ ಗುರುಸ್ಥಲಕ್ಕೆ ಸಲ್ಲ, ಚರಸ್ಥಲಕ್ಕೆ ಸಲ್ಲ, ಪರಸ್ಥಲಕ್ಕೆ ಸಲ್ಲ. ಗುರುಸ್ಥಲವೆಂದಡೆ ಘನಲಿಂಗಸ್ಥಲವು. ಚರಸ್ಥಲವೆಂದಡೆ ಅತೀತಸ್ಥಲವು. ಪರಸ್ಥಲವೆಂದಡೆ ವಿರಕ್ತಿಸ್ಥಲವು. ಇಂತೀ ತ್ರಿವಿಧಸ್ಥಲದ ನಿರ್ಣಯವ ಬಲ್ಲಾತನೆ ಗುರುಸ್ಥಲಕ್ಕೆ ಯೋಗ್ಯನೆಂಬೆನು; ಚರಸ್ಥಲಕ್ಕೆ ಯೋಗ್ಯನೆಂಬೆನು; ಪರಸ್ಥಲಕ್ಕೆ ಯೋಗ್ಯನೆಂಬೆನು. ಇಂತೀ ತ್ರಿವಿಧನಿರ್ಣಯವನರಿಯದೆ ತ್ರಿವಿಧಮಲದಲ್ಲಿ ಭಂಗಿತರಾದವರ ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ ನಿಮ್ಮ ಧರ್ಮ.