ಸತ್ಯಾಸತ್ಯವೆಂದು ವಿವರಿಸಿ ತಿಳಿದು
ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ
ಘನಲಿಂಗದೇವರೆಂಬೆನು.
ನಿತ್ಯಾನಿತ್ಯವೆಂದು ವಿವರಿಸಿ ತಿಳಿದು
ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ
ಘನಲಿಂಗದೇವರೆಂಬೆನು.
ಪುಣ್ಯಪಾಪವೆಂದು ವಿವರಿಸಿ ತಿಳಿದು
ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ
ಘನಲಿಂಗದೇವರೆಂಬೆನು.
ಧರ್ಮಕರ್ಮವೆಂದು ವಿವರಿಸಿ ತಿಳಿದು
ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ
ಘನಲಿಂಗದೇವರೆಂಬೆನು.
ಆಚಾರ ಅನಾಚಾರವೆಂದು ವಿವರಿಸಿ ತಿಳಿದು
ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ
ಘನಲಿಂಗದೇವರೆಂಬೆನು.
ಇಂತೀ ಉಭಯದ ನ್ಯಾಯವನರಿಯದೆ
ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ
ಘಟವ ಹೊರೆವ ಕುಟಿಲ ಕುಹಕರ
ತುಟಿಯತನಕ ಮೂಗಕೊಯ್ದು
ಕಟವಾಯ ಸೀಳಿ ಕನ್ನಡಿಯ ತೋರಿ
ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ
ನಮ್ಮ ಅಖಂಡೇಶ್ವರ?
Art
Manuscript
Music
Courtesy:
Transliteration
Satyāsatyavendu vivarisi tiḷidu
asatyava kaḷedu satyava sādhisaballaḍe
ghanaliṅgadēvarembenu.
Nityānityavendu vivarisi tiḷidu
anityava kaḷedu nityava hiḍiyaballaḍe
ghanaliṅgadēvarembenu.
Puṇyapāpavendu vivarisi tiḷidu
pāpava kaḷedu puṇyava grahisaballaḍe
ghanaliṅgadēvarembenu.
Dharmakarmavendu vivarisi tiḷidu
karmava kaḷedu dharmava biḍadiraballaḍe
ghanaliṅgadēvarembenu.
Ācāra anācāravendu vivarisi tiḷidu
anācārava kaḷedu ācārasampannanāgaballaḍe
ghanaliṅgadēvarembenu.
Intī ubhayada n'yāyavanariyade
saṭeyane diṭava māḍi diṭavane saṭeyamāḍi
ghaṭava horeva kuṭila kuhakara
tuṭiyatanaka mūgakoydu
kaṭavāya sīḷi kannaḍiya tōri
kaṣṭajanmadalli huṭṭisade biḍuvane
nam'ma akhaṇḍēśvara?