Index   ವಚನ - 634    Search  
 
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು ಆ ಜಗದ ಸ್ವರೂಪನೆ? ಅಲ್ಲಲ್ಲ. ಅದೇನು ಕಾರಣವೆಂದೊಡೆ: ಕೋಗಿಲೆಯ ತತ್ತಿಯನೊಡೆದು ಕಾಗೆ ಮರಿಯಮಾಡಿ ಸಲಹಿದಡೇನು ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ? ಲೋಕದ ಮಧ್ಯದಲ್ಲಿ ಅನಾದಿ ಶರಣನು ಲೋಕೋಪಕಾರಕ್ಕಾಗಿ ಜನಿಸಿದಡೇನು ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ ಮರಳಿ ಲೋಕವ ಬೆರೆಯನು ನೋಡಾ, ನಿಮ್ಮನರಿದ ಶಿವಜ್ಞಾನಿ ಶರಣನು ಅಖಂಡೇಶ್ವರಾ.