Index   ವಚನ - 652    Search  
 
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು! ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು, ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ? ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ, ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ, ಸಚ್ಚಿದಾನಂದಪರಬ್ರಹ್ಮವ ಕೂಡಿ ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು. ಅವರೇ ನಿಮ್ಮ ಶರಣರು, ಅವರೇ ಮಹಾಜ್ಞಾನಘನವ ನುಂಗಿದ ಮಹಾಂತರು ನೋಡಾ ಅಖಂಡೇಶ್ವರಾ.