Index   ವಚನ - 654    Search  
 
ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮೆಗಳ ಹುಡಿಮಾಡಿ ಸುಟ್ಟುರುಹಿ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್‍ವರ್ಗಂಗಳ ಬೇರ ಕಿತ್ತು ಬಿಸುಟು. ಇಷ್ಟಲಿಂಗಕ್ಕೆ ನೈಷ್ಠೆಯಿಂದ ಜಲ ಗಂಧಾಕ್ಷತೆ ಧೂಪ ದೀಪ ನೈವೇದ್ಯ ತಾಂಬೂಲವೆಂಬ ಅಷ್ಟವಿಧಾರ್ಚನೆಯ ಮಾಡಿ, ಮತ್ತಾ ಲಿಂಗವನು ಧ್ಯಾನಮುಖದಿಂದೆ ಅಂತರಂಗಕ್ಕೆ ಬಿಜಯಂಗೈಸಿ, ಹೃದಯಕಮಲಕರ್ಣಿಕಾಸ್ಥಾನದಲ್ಲಿ ಕುಳ್ಳಿರಿಸಿ, ಪ್ರಾಣಾಯಾಮ ನಿರ್ಗುಣದ ಅಷ್ಟವಿಧಾರ್ಚನೆಯ ಮಾಡಿ, ಚಿತ್ತ ಸ್ವಸ್ಥಿರವಾಗಿ, ಭಾವವು ಬಯಲಬ್ರಹ್ಮದಲ್ಲಿ ಹೂಳಿಹೋಗಿ ತಾನಿದಿರೆಂಬುದನಳಿದು, ಉರಿ ಕರ್ಪುರದಂತೆ ಅವಿರಳ ಸಮರಸವಾಗಿರ್ಪಾತನೆ ನಿಜೈಕ್ಯನು ನೋಡಾ. ಅದೆಂತೆಂದೊಡೆ: ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ನಿಜಲಿಂಗೈಕ್ಯಂ ಶಿಖಿಕರ್ಪೂರಯೋಗವತ್''|| ಎಂದುದಾಗಿ, ಇಂತಪ್ಪ ನಿಜಲಿಂಗೈಕ್ಯರ ಮಹಾಘನ ನಿಜದ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.