Index   ವಚನ - 655    Search  
 
ವೇದ ಶಾಸ್ತ್ರಾಗಮ ಪುರಾಣಂಗಳನೋದಿ ಆದಿಯ ಪಥವ ಸಾಧಿಸಬೇಕೆಂಬ ಭೇದಬುದ್ಧಿಯ ಭ್ರಾಂತಜ್ಞಾನಿಯಲ್ಲ ನೋಡಾ ಲಿಂಗೈಕ್ಯನು. ಷಟ್‍ದರ್ಶನಂಗಳ ಶೋಧಿಸಿ ಕಡುಮುಕ್ತಿಯ ಪಡೆವೆನೆಂಬ ಜಡಮತಿಯವನಲ್ಲ ನೋಡಾ ಲಿಂಗೈಕ್ಯನು. ಕುಟಿಲವ್ಯಾಪಾರದಿಂದೆ ಸಟೆಯನೆ ಸಂಪಾದಿಸಿ ಘಟವ ಹೊರೆವನಲ್ಲ ನೋಡಾ ಲಿಂಗೈಕ್ಯನು. ಕಾಕುಮನದ ಕಳವಳನಡಗಿಸಿ ಲೋಕರಂಜನೆಯನುಡುಗಿಸಿ ಕುರುಹಿಲ್ಲದ ಬ್ರಹ್ಮದಲ್ಲಿ ತೆರಹಿಲ್ಲದಿರ್ಪನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.