Index   ವಚನ - 660    Search  
 
ಸರ್ವಾಚಾರಸಂಪತ್ತನರಿದಲ್ಲದೆ ನಿರವಯಲಪದವ ಕಾಣಬಾರದು ನೋಡಾ ಆರಿಗೆಯು. ಸರ್ವಾಚಾರಸಂಪತ್ತು ಎಂತೆನಲು, ಷಡ್‍ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ, ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು, ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅಧಿದೈವಂಗಳನೆ ಷಡ್ವಿಧ ಅಂಗವೆಂದಾಧಾರಗೊಳಿಸಿ, ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು, ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು, ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ ಷಡ್ವಿಧ ಪದಾರ್ಥಂಗಳೆಂದರಿದು, ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು, ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ ತೊಳಗಿ ಬೆಳಗುತಿರ್ಪುದು ನೋಡಾ. ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ, ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ. ಇಂತಪ್ಪ ಸರ್ವಾಚಾರಸಂಪತ್ತು ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ ಉಳಿದವರಿಗಳವಡದಯ್ಯಾ ಅಖಂಡೇಶ್ವರಾ?