Index   ವಚನ - 665    Search  
 
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.