Index   ವಚನ - 666    Search  
 
ಬಾರಯ್ಯ ಬಾರಯ್ಯ ಗಂಡನೆ, ಎನ್ನ ಘ್ರಾಣವೆಂಬ ಭಾಜನದಲ್ಲಿ ಸುಗಂಧಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಜಿಹ್ವೆಯೆಂಬ ಭಾಜನದಲ್ಲಿ ಸುರುಚಿಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ನೇತ್ರವೆಂಬ ಭಾಜನದಲ್ಲಿ ಸುರೂಪುಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ತ್ವಕ್ಕೆಂಬ ಭಾಜನದಲ್ಲಿ ಸುಸ್ಪರ್ಶನಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಶ್ರೋತ್ರವೆಂಬ ಭಾಜನದಲ್ಲಿ ಸುಶಬ್ದಪದಾರ್ಥವೆಂಬ ಸುಯಿಧಾನವ ಗಡಣಿಸಿ ನಿಮಗೆ ಉಣಲಿಕ್ಕುವೆ. ಬಾರಯ್ಯ ಬಾರಯ್ಯ ಗಂಡನೆ, ಎನ್ನ ಮನವೆಂಬ ಭಾಜನದಲ್ಲಿ ನೆನಹೆಂಬ ಸುಯಿಧಾನವ ಗಡಣಿಸಿ ಉಣಲಿಕ್ಕುವೆನಯ್ಯಾ ನಿಮಗೆ ಅಖಂಡೇಶ್ವರಾ.