ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು.
ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು.
ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು.
ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ,
ಕೇವಲ ನಿರವಯಮೂರ್ತಿಗೆ ಆನಂದ,
ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು.
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು
ಸೂಕ್ಷ್ಮದ ಷಡ್ವಿಧಲಿಂಗವು.
ಇವಕ್ಕೆ `ಓಂ ನಮಃಶಿವಾಯ' ಎಂಬುದೇ ತೃಪ್ತಿ.
ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ.
ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ
ನಿಜಾನಂದವಾಗಿಹುದು.
ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು
ಭೇರಿನಾದದಂತೆ ಆಕಾಶಧ್ವನಿಯಂತೆ
ತನಗೆ ತಾನೇ ಕೇಳುವುದು.
ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ
ಗಾಳಿಪಟಕ್ಕೆ ಬೇರಬಿರಿಕೆಯ
ಕಟ್ಟಿ ನುಡಿಸುವ ತೆರದಂತೆ ತೇಜವಾಗಿ
ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ
ಎರಡಂಗುಲದ ಮೇಲೆ ತೇಜವಿಹುದು.
ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ,
ಚಂದ್ರಜ್ಯೋತಿಯ ಪ್ರಭೆಯಂತೆ,
ಹೂಬಿಸಿಲಿನಂತೆ ತೋರುತಿರ್ಪುದು.
ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ.
ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ
ಓಂಕಾರಧ್ವನಿಯ ಝೇಂಕಾರದಂತೆ,
ಘಂಟೆಯ ಬಾರಿಸಿದಂತೆ,
ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು.
ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ.
ನಾದದೊಳಗಿರ್ದ ನಾದವೇ ಓಂಕಾರ.
ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ
ಎರಡಂಗುಲದಲ್ಲಿ ಕಾಣಿಸುತ್ತಿಹುದು.
ಅದು ಮನದಿಂದೆ ಕಂಡಿತೋ ಕಣ್ಣಿನಿಂದ
ಕಂಡಿತೋ ಎಂದಡೆ,
ನೆನಹು ಎಂಬ ಅಂತಃಕರಣ
ಓಂ ನಮಃಶಿವಾಯ ಎಂಬ
ಪ್ರಣವಜ್ಯೋತಿಯ ತೋರಿತ್ತು.
ಚಿತ್ತದ ತೋರಿಕೆ
ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ
ತೇರಿನ ಬದಿಯ ಬಿರಿಸಿನೋಪಾದಿಯ
ನೆನಹು ಮಾತ್ರಕ್ಕೆ ತೋರುತ್ತಿಹುದು.
ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು,
ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ
ಆನಂದವೇ ತೋರುತ್ತಿಹುದು.
ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು,
ಅಂತರಂಗದ ಛಾಯೆಯಂತೆ,
ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ,
ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು.
ಆತ ಭವದಬಳ್ಳಿಯ ಹರಿದು
ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು.
ಇನ್ನು `ಓಂ ನಮಃಶಿವಾಯ' ಎಂಬ ಊರ್ಧ್ವಪ್ರಣವ.
ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು.
ಅದಕ್ಕೆ ತಟಿಮಂತ್ರ.
ಅಂತರಂಗದ ಬಾಯಲ್ಲಿ ಎಡಬಲವು
ಎರಡು ಕರ್ಣದ್ವಾರಂಗಳಲ್ಲಿ
ನುಡಿಯ ಕೇಳಿದಡೆ ಸುನಾದವಾಯಿತ್ತು.
ಅದು ದಶನಾದಂಗಳಿಂದೆ
ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ
ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು
ಗುರುಮುಖದಿಂದರಿತು ಹಗಲಿರುಳು
ಆ ದಶನಾದಂಗಳೊಳಗಾದ ಸುನಾದವನು
ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು.
ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ; ಶರಣಸ್ಥಲ.
ಆ ಸ್ಥಲದಲ್ಲಿ ನಾದವ ಕೇಳಿದವರಿಗೆ
ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು,
ತನುತ್ರಯಂಗಳು
ತೂರ್ಯದಲ್ಲಿ ಹರಿದುಹೋಗುವವು.
ಸುನಾದದಲ್ಲಿ ಮನಸ್ಸಿಟ್ಟಡೆ
ಓಂ ನಮಃಶಿವಾಯ ಎಂಬ
ಪ್ರಣವನಾದವ ಕೇಳಿದವರಿಗೆ
ಸ್ವಪ್ನವು ಎಂದಿಗೂ ತೋರದು.
ಇರುಹೆ ಸುಳಿದಡೆ ಎಚ್ಚರಿಕೆ,
ದಿಗಿಲುಭುಗಿಲೆಂದಡೆ ನೀನಾರೆಲಾ
ಎಂದು ಮಾತನಾಡಿಸಿಬಿಡುವನು.
ಆ ಪ್ರಣವಘೋಷ ಸತ್ತೆನೆಂಬಂತೆ
ದಿವಸ ಹನ್ನೆರಡು ತಾಸಿನೊಳಗೆ
ತನುವ ಬಿಡುವ ಸಮಯದಲ್ಲಿ,
ಆ ಘೋಷ ನಿರ್ಘೋಷವಾಗಿ ನಾದ ನುಡಿಯದು.
ಅದು ಲಕ್ಷವಿಟ್ಟು ನೋಡಿದಡೆ ತೋರುವುದು.
ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು.
ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು.
ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ
ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು.
ಈ ಮನೆಯ ಶಿವಶರಣ ಬಲ್ಲ.
ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು.
ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು.
ತನ್ನವಸಾನಕಾಲದ ಎಚ್ಚರಿಕೆಯನರಿದು,
ಗೋವು ಮಲಗುವಷ್ಟು ಧರಣಿಯ
ಸಾರಣಿಯ ಮಾಡುವುದು.
ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ
ಗೋಘೃತ ಗೋರೋಚನ ಎಂಬ
ಷಡುಸಮ್ಮಾರ್ಜನೆಯ ಮಾಡುವುದು.
ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ
ಸಮ್ಮಾರ್ಜನೆಯ ಮಾಡುವುದು.
ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು.
ಪಾದೋದಕ ಪ್ರಸಾದಮಂ ಸಲಿಸಿ,
ಶಿವಗಣಂಗಳಿಗೆ ವಂದನೆಯ ಮಾಡಿ,
ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ
ಮುಹೂರ್ತವ ಮಾಡಿ,
`ಓಂ ನಮಃಶಿವಾಯ' ಎಂಬ ಪ್ರಣವಸ್ಮರಣೆಯ ಮಾಡುವುದು.
ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು
ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ
ಜಾಜಿ ಕರವೀರ ಸುರಹೊನ್ನೆ ಸಂಪಿಗೆ
ಮರುಗ ಪಚ್ಚೆ ದವನ ಬಿಲ್ವಪತ್ರೆ
ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ,
ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ,
ದೇವಭಕ್ತರು ಬಂದಡೆ ಶರಣಾರ್ಥಿ ಎಂದು,
ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ,
ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು,
ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ,
ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು.
ಮದುವೆ ಮಾಂಗಲ್ಯ ಅರ್ತಿ ಉತ್ಸಾಹ
ಶಿಶುವಿನ ಹೆಸರಿಡುವ ಹಾಗೆ
ಹರುಷ ಪರುಷ ಧೈರ್ಯವೇ
ಭೂಷಣವಾಗಿ ನಿರೋಧಂಗಳ ಮಾಡದೆ
``ಓಂ ನಮಃಶಿವಾಯ' ಎಂಬ ಮಂತ್ರ ಭೋರ್ಗರೆಯೆ
ನಿರ್ಮಲ ನೈಷ್ಠಿಕದಿಂದೆ
ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು.
ಹಿತವಂತರಾದವರು ವೀರಶೈವ
ಪರಮವಚನಂಗಳಂ ಕೇಳಿಸುವುದು.
ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು
`ಓಂ ನಮಃಶಿವಾಯ' ಎಂಬ ಶಿವಮಂತ್ರವನ್ನು
ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು.
ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ,
ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ
ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ,
ಮಂತ್ರಮಂತ್ರವು ಸಂಬಂಧವಾಗಿ,
ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹ ಪ್ರಾಣವು.
ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ,
ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ.
Art
Manuscript
Music
Courtesy:
Transliteration
Sakalamūrtiyāgi iṣṭaliṅgavāyittu.
Niṣkalamūrtiyāgi prāṇaliṅgavāyittu.
Kēvala niravayamūrtiyāgi bhāvaliṅgavāyittu.
Sakalamūrtige kriye, niṣkalamūrtige jñāna,
kēvala niravayamūrtige ānanda,
sthūlavē kāya, sūkṣmavē prāṇa, kāraṇavē vastu.
Ghrāṇa jihve nētra tvakku śrōtra hr̥dayavembavu
sūkṣmada ṣaḍvidhaliṅgavu.
Ivakke `ōṁ namaḥśivāya' embudē tr̥pti.
Santōṣavē kāraṇa, mahākāraṇavē pariṇāma.
Tūryātītavāgi sarvakēḷikeyaṁ kēḷi
nijānandavāgihudu.
Virāṭavē sunādavāgi horabiddu nuḍidu
Bhērinādadante ākāśadhvaniyante
tanage tānē kēḷuvudu.
Hiraṇyagarbhabinduvina maneyalli
gāḷipaṭakke bērabirikeya
kaṭṭi nuḍisuva teradante tējavāgi
śaṅkhada dhvaniyante tōrutirpa sunādakke
eraḍaṅgulada mēle tējavihudu.
Adu tumbida huṇṇimeya beḷadiṅgaḷante,
candrajyōtiya prabheyante,
hūbisilinante tōrutirpudu.
Kaḷeya maneyalli eraḍaṅgula pramāṇa.
Mūlaprakr̥ti mūginamēle bhrūmadhya praṇavadalli
ōṅkāradhvaniya jhēṅkāradante,
ghaṇṭeya bārisidante,
taṭataṭane hāri adu bhrūmadhyasthānadalli tōruvudu.
Nādavē śabda, niḥśabdavē bindumaya.
Nādadoḷagirda nādavē ōṅkāra.
Cijjyōtiya prakāśa bhrūmadhyada paṇeya mēle
eraḍaṅguladalli kāṇisuttihudu.
Adu manadinde kaṇḍitō kaṇṇininda
kaṇḍitō endaḍe,
nenahu emba antaḥkaraṇa
ōṁ namaḥśivāya emba
praṇavajyōtiya tōrittu.
Cittada tōrike
aravattārukōṭi praṇavajyōtiya kiraṇadalli
tērina badiya birisinōpādiya
nenahu mātrakke tōruttihudu.
Horadr̥ṣṭiya oḷagiṭṭu, oḷadr̥ṣṭiya horagiṭṭu paripūrṇavāgalu,Oḷahorage nōḍuva śivaśaraṇara mana bhāvakke
ānandavē tōruttihudu.
Dinakarana kānti, madhyāhnada bisilu,
antaraṅgada chāyeyante,
nirmalavāda darpaṇada pratibimbadante,
tanna rūpaṅgaḷa tāne nōḍidātanu jīvanmuktanu.
Āta bhavadabaḷḷiya haridu
nityānanda nirmaḷa nirāvaraṇa nija cinmayanāgihanu.
Innu `ōṁ namaḥśivāya' emba ūrdhvapraṇava.
Aḷḷanettiya sthānadalli aruhina maneyuṇṭu.
Adakke taṭimantra.
Antaraṅgada bāyalli eḍabalavu
eraḍu karṇadvāraṅgaḷalli
nuḍiya kēḷidaḍe sunādavāyittu.
Adu daśanādaṅgaḷinde
Śaradhi nirjhara mēgha muraja bhēri kahaḷe
ghaṇṭe śaṅkha vīṇe bhramaranādaṅgaḷemba daśanādaṅgaḷanu
gurumukhadindaritu hagaliruḷu
ā daśanādaṅgaḷoḷagāda sunādavanu
eḍederahillade lālisi kēḷuvudu śivayōgīśvararu.
Adu prasādaliṅgasthala, viśud'dhiya mane; śaraṇasthala.
Ā sthaladalli nādava kēḷidavarige
jāgra svapna suṣuptigaḷemba mūravasthegaḷu,
Tanutrayaṅgaḷu
tūryadalli hariduhōguvavu.
Sunādadalli manas'siṭṭaḍe
ōṁ namaḥśivāya emba
praṇavanādava kēḷidavarige
svapnavu endigū tōradu.
Iruhe suḷidaḍe eccarike,
digilubhugilendaḍe nīnārelā
endu mātanāḍisibiḍuvanu.
Ā praṇavaghōṣa sattenembante
divasa hanneraḍu tāsinoḷage
tanuva biḍuva samayadalli,
ā ghōṣa nirghōṣavāgi nāda nuḍiyadu.
Adu lakṣaviṭṭu nōḍidaḍe tōruvudu.
Aṅgula pramāṇavāgi vastuvu aṅguṣṭakke baruvudu.
Vr̥kṣavanērida sarpanante brahmarandhrada konegēruvudu.
Heddumbiya koḷaviyōpādiyalli
vastuvu aḷḷinettiya sthānadalli ēri hōguvudu.
Ī maneya śivaśaraṇa balla.
Idu hanneraḍu tāsu purasattigeya hēḷida aruhu.
Intappa vastuvina nilukaḍeya balla śaraṇanu.
Tannavasānakālada eccarikeyanaridu,
gōvu malaguvaṣṭu dharaṇiya
sāraṇiya māḍuvudu.
Gōmaya gōmūtra gōkṣīra gōdadhi
gōghr̥ta gōrōcana emba
ṣaḍusam'mārjaneya māḍuvudu.
Śivajaṅgamada dhūḷapādārcaneya udakamaṁ nīḍi
sam'mārjaneya māḍuvudu.
Raṅgavalliya tumbuvudu, bhasmava taḷevudu.
Pādōdaka prasādamaṁ salisi,
śivagaṇaṅgaḷige vandaneya māḍi,
ā sam'mārjaneya māḍida gadgugeya mēle
muhūrtava māḍi,
`ōṁ namaḥśivāya' emba praṇavasmaraṇeya māḍuvudu.
Hastadalli iṣṭaliṅgava hiḍidukoṇḍu
iravantige sēvantige molle mallige
jāji karavīra surahonne sampige
maruga pacce davana bilvapatre
modalāda samasta puṣpa patregaḷa dharisi,
ā śivaliṅgavanu manavolidu kaṅgaḷa tumbi nōḍutta,
dēvabhaktaru bandaḍe śaraṇārthi endu,
majjanava nīḍisi, vibhūtiya dharisi,
Puṣpapatregaḷa dharisi endu avara pādaviḍidu,
śaraṇārthi svāmigaḷige endu hēḷi,
śivārpaṇava māḍi endu binnahava māḍuvudu.
Maduve māṅgalya arti utsāha
śiśuvina hesariḍuva hāge
haruṣa paruṣa dhairyavē
bhūṣaṇavāgi nirōdhaṅgaḷa māḍade
``ōṁ namaḥśivāya' emba mantra bhōrgareye
nirmala naiṣṭhikadinde
śivajaṅgamada pādavanu mastakada mēle iḍisuvudu.
Hitavantarādavaru vīraśaiva
paramavacanaṅgaḷaṁ kēḷisuvudu.
Eḍabaladallirda sakala bhaktaru mahēśvararu
`ōṁ namaḥśivāya' emba śivamantravannu
Ā śaraṇana karṇaṅgaḷalli uccarisuvudu.
Ī haḍagada haggava mattondu haḍagakke hāki bigidaḍe,
haḍagakke haḍaga kūḍi, samudrada tereyōpādiyalli
haḍagava biṭṭu pratihaḍagadoḷage mūrtava māḍidante,
mantramantravu sambandhavāgi,
uri karpura koṇḍantāyittu śaraṇana dēha prāṇavu.
Idu guhyakke guhya, gōpyakke gōpya,
rahasyakke ati rahasya nōḍā akhaṇḍēśvarā.