Index   ವಚನ - 695    Search  
 
ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ ಅವಿರಳ ಸಮರಸದಿಂದಡಗಿದ ಶರಣಂಗೆ ಜ್ಞಾನಕ್ರಿಯೆಯೆಂಬುದೇನೊ? ಧ್ಯಾನಮೌನವೆಂಬುದೇನೊ? ನೇಮ ನಿತ್ಯವೆಂಬುದೇನೊ? ಜಪತಪವೆಂಬುದೇನೊ? ಅರುಹು ಆಚಾರವೆಂಬುದೇನೊ? ಕುರುಹು ಪೂಜೆಯೆಂಬುದೇನೊ? ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ, ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ? ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ, ವಿಪರೀತ ಭ್ರಾಂತಿ, ಅಜ್ಞಾನವೆಂದು ತಿಳಿದು, ಇವನೆಲ್ಲವ ವಿಭಾಗಿಸಿ ಕಳೆದು, ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು, ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೇಹಿಯಾಗಿರ್ದನಯ್ಯಾ ನಿಮ್ಮ ಶರಣ ಅಖಂಡೇಶ್ವರಾ.