Index   ವಚನ - 696    Search  
 
ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೇಪನಾಗಿರ್ಪನಯ್ಯಾ ಅಖಂಡೇಶ್ವರಾ.