Index   ವಚನ - 711    Search  
 
ಕೇಳಿ ಕೇಳಿರಯ್ಯಾ ಮರ್ತ್ಯಲೋಕದ ಮಹಾಗಣಂಗಳು ನೀವೆಲ್ಲ. ನಾವು ನಮ್ಮ ಲಿಂಗದೊಳಗೆ ಅಂಗಸಹಿತ ಐಕ್ಯವಾಗುವ ಠಾವ ಹೇಳಿಹೆವು ಕೇಳಿರಯ್ಯಾ! ಕೇಳಿರಯ್ಯಾ, ಏಕಚಿತ್ತರಾಗಿ ಲಾಲಿಸಿರಯ್ಯಾ. ಷಣ್ಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸದಾನಂದನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸದಾನಂದನೆಂಬ ಗಣೇಶ್ವರನ ಹೃದಯಕಮಲಕರ್ಣಿಕದಲ್ಲಿ ವಿಶ್ವತೋಮುಖನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ವಿಶ್ವತೋಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಆದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಆದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅನಾದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅನಾದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಗೋಳಕನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಗೋಳಕನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಗಮ್ಮೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಗಮ್ಮೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಖಂಡೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಖಂಡೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಜ್ಯೋತಿರ್ಮಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಜ್ಯೋತಿರ್ಮಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಭೇದ್ಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಭೇದ್ಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಪ್ರಮಾಣನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಪ್ರಮಾಣನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅವಾಚ್ಯಾತ್ಮಕನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅವಾಚ್ಯಾತ್ಮಕನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನ ಹೃದಯಕಮಲಮಧ್ಯದ ಮಹಾಬಯಲೊಳಗೆ ನಮ್ಮ ಅಖಂಡೇಶ್ವರಲಿಂಗಸಹಿತ ನಿರವಯಲಾಗಿ ಮರಳಿ ಇತ್ತ ಬಾರದಿರ್ಪೆವು ಕೇಳಿರಯ್ಯಾ.